ಶತಸಂಭ್ರಮಕ್ಕೆ ಸಜ್ಜಾಗುತ್ತಿದೆ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್- ಬೇಕಿದೆ ದಾನಿಗಳು ಮತ್ತು ಹಳೇ ವಿದ್ಯಾರ್ಥಿಗಳ ನೆರವು

ಯುವಧ್ವನಿ ಸ್ಪೆಶಲ್ ಸ್ಟೋರಿ;

ಬರೊಬ್ಬರೀ 96 ವರ್ಷಗಳ ಇತಿಹಾಸವಿರುವ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಶತಮಾನೊತ್ಸವ ಸಂಭ್ರಮಕ್ಕೆ ಸಜ್ಜಾಗುತ್ತಿದ್ದು ಶಾಲೆಯ ಅಗತ್ಯ ಬೇಡಿಕೆಗಳು ತುರ್ತು ಈಡೇರಬೇಕಾಗಿದೆ. ಈ ನಿಟ್ಟಿನಲ್ಲಿ ದಾನಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಭಿಮಾನಿಗಳು ಸ್ಪಂದಿಸಬೇಕಾದ ಅಗತ್ಯವಿದೆ.

ಖಾಲಿ ಇರುವ ಹುದ್ದೆಗಳ ನೇಮಕಾತಿ, ಸುಸಜ್ಜಿತವಾದ ಶೌಚಾಲಯಗಳು, ಅಕ್ಷರದಾಸೋಹ ಕಟ್ಟಡ, ವಿಶಾಲ ಸಭಾಂಗಣ, ಕಂಪ್ಯೂಟರ್ ಕೊಠಡಿ, ಕಂಪ್ಯೂಟರ್‍ಗಳು, ಗ್ರಂಥಾಲಯ, ಪ್ರಯೋಗಾಲಯ, ಶಾಲಾ ಸುತ್ತ ಆವರಣ ಗೋಡೆ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಸೋಲಾರ್ ಸಿಸ್ಟಂ, ಪೀಠೋಪರಕಣಗಳು, ತರಗತಿ ಕೊಠಡಿಗಳ ಸಹಿತ ಹಲವು ಕೊರತೆಯನ್ನು ಶಾಲೆಯು ಎದುರಿಸುತ್ತಿದ್ದು ಸೂಕ್ತ ಸೌಲಭ್ಯಗಳು ದೊರೆತಲ್ಲಿ ಈ ಶಾಲೆಯು ರಾಜ್ಯಕ್ಕೆ ಮಾದರಿಯಾಗಲಿದೆ

ಬೆಳ್ತಂಗಡಿ ತಾಲೂಕಿನಲ್ಲೇ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಾಗಿರುವುದರಿಂದ ಕೆಲವು ಸೌಲಭ್ಯಗಳು ಅಗತ್ಯವಾಗಿ ಬೇಕಾಗಿದೆ. ಈಗಿರುವ ಸೌಲಭ್ಯದಲ್ಲೇ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು ಇನ್ನಷ್ಟು ಸೌಲಭ್ಯಗಳೊಂದಿಗೆ ಶಾಲೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ದಾನಿಗಳು ಮತ್ತು ಹಳೇ ವಿದ್ಯಾರ್ಥಿಗಳ ನೆರವನ್ನು ನಿರೀಕ್ಷಿಸಲಾಗಿದೆ ಎನ್ನುತ್ತಾರೆ ಪಧವೀಧರೇತರ ಮುಖ್ಯೋಪಾದ್ಯಾಯರಾದ ಕೆ.ಮೋನಪ್ಪ ಅವರು.

ಮುಖ್ಯ ಶಿಕ್ಷಕ ಕೆ.ಮೋನಪ್ಪ (ಪಧವೀಧರೇತರ ಮುಖ್ಯ ಶಿಕ್ಷಕರು) ಮತ್ತು ಶಿಕ್ಷಕವೃಂದ ಹಾಗೂ ಕೆ.ಜಯರಾಮ ಶೆಟ್ಟಿ ಕುರಿಯಾಡಿ ಅಧ್ಯಕ್ಷ ಮತ್ತು ಸದಸ್ಯರಿರುವ ಎಸ್‍ಡಿಎಂಸಿಯು ಈಗಾಗಲೇ ಶಾಲಾ ಬಸ್ಸಿನ ವ್ಯವಸ್ಥೆ, ಸ್ವಚ್ಚತಾ ಕಾರ್ಯಕ್ರಮ, ಎರಡು ಕೊಠಡಿಗಳ ನಿರ್ಮಾಣ, ಗೌರವ ಶಿಕ್ಷಕಿಯರ ನೇಮಕ ಸಹಿತ ಶಾಲೆಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ವಿವಿಧ ಬೇಡಿಕೆಗಳ ಬಗ್ಗೆ ಸರಕಾರಕ್ಕೂ ಮನವಿ ಮಾಡಲಾಗಿದ್ದು ಇದೀಗ ದಾನಿಗಳು ಹಾಗೂ ಹಳೇ ವಿದ್ಯಾರ್ಥಿಗಳನ್ನು ಸಂಘಟಿಸಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ.

ಈ ವರ್ಷ ನಮ್ಮ ಶಾಲೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದು ಮಕ್ಕಳ ಸಂಖ್ಯೆಗನುಗುಣವಾಗಿ ಅನೇಕ ಸೌಲಭ್ಯಗಳು ಅಗತ್ಯವಿದೆ. ಶಾಲಾಭಿವೃದ್ಧಿ ಸಮಿತಿಯು ಪೋಷಕರ ಸಹಕಾರದೊಂದಿಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇನ್ನಷ್ಟು ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುವರೇ ದಾನಿಗಳು ಹಾಗೂ ಹಳೇ ವಿದ್ಯಾರ್ಥಿಗಳ ಸಹಕಾರದ ಅಗತ್ಯವಿದೆ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಜಯರಾಮ ಶೆಟ್ಟಿ ಕುರಿಯಾಡಿ.

ಶಾಲಾ ಹೆಗ್ಗಳಿಕೆಗಳು:

ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಗಡಿಭಾಗವಾದ ಪುಂಜಾಲಕಟ್ಟೆಯ ಮೇಲಿನ ಪೇಟೆ ಸನಿಹದ ರಸ್ತೆಯಂಚಿನಲ್ಲಿರುವ ಈ ಶಾಲೆ ಸ್ಥಾಪನೆಯಾಗಿದ್ದು 1925ರಲ್ಲಿ. ಅದೆಷ್ಟೋ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದ್ದಾರೆ. ಈ ಪೈಕಿ ಸಹಸ್ರಾರು ಮಂದಿ ಊರಿನಲ್ಲಿ-ಪರವೂರಿನಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಈ ಶಾಲೆ ಉಳಿದು ಬೆಳೆಯುವಲ್ಲಿ ಅದೆಷ್ಟೋ ಶಿಕ್ಷಕ-ಶಿಕ್ಷಕಿಯರು, ದಾನಿಗಳು, ಶಿಕ್ಷಣಾಭಿಮಾನಿಗಳ ಪರಿಶ್ರಮವಿದೆ, ತ್ಯಾಗವಿದೆ. ಪ್ರಸ್ತುತ ಎಲ್‍ಕೆಜಿಯಿಂದ 8ನೇ ತರಗತಿವರೆಗೆ ವಿದ್ಯಾರ್ಜನೆಗೆ ಅವಕಾಶವಿದ್ದು 764 ಮಕ್ಕಳು ವಿದ್ಯಾರ್ಜನೆಗೆಯ್ಯುತ್ತಿದ್ದಾರೆ. ಹಿಂದಿನಿಂದಲೂ ಬೆಳ್ತಂಗಡಿ ತಾಲೂಕಿನ ಉತ್ತಮ ಶಾಲೆಯೆಂದು ಖ್ಯಾತಿ ಪಡೆದಿರುವ ಈ ಶಾಲೆಯು ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಗಡಿಭಾಗದಲ್ಲಿರುವುದರಿಂದ ಎರಡು ತಾಲೂಕುಗಳ ಹತ್ತಾರು ಹಳ್ಳಿಗಳ ಮಕ್ಕಳು ಇಲ್ಲಿ ವಿದ್ಯಾರ್ಜನೆಗೈಯ್ಯುತ್ತಿದ್ದಾರೆ.

ದೂರದೂರಿನ ಮಕ್ಕಳು ಬರಲು ಬಸ್ಸಿನ ವ್ಯವಸ್ಥೆ, ನುರಿತ ಶಿಕ್ಷಕವೃಂದ, ಕ್ರಿಯಾಶೀಲ ಎಸ್‍ಡಿಎಂಸಿ, ಸಕ್ರೀಯ ಪೋಷಕ ವೃಂದ, ಮಕ್ಕಳ ಸಮಗ್ರ ವಿಕಸನಕ್ಕೆ ಪೂರಕವಾದ ಗುಣಮಟ್ಟದ ಶಿಕ್ಷಣ, ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮ ಎರಡು ಇರುವ ಬೆಳ್ತಂಗಡಿ ತಾಲೂಕಿನ ಏಕೈಕ ಶಾಲೆಯೆಂಬ ವಿಶೇಷತೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬ ಮಾನ್ಯತೆ, ತಾಲೂಕಿನಲ್ಲೇ ಗರಿಷ್ಠ ಶಾಖೆಯ ವಿದ್ಯಾರ್ಥಿಗಳಿರುವ ಶಾಲೆ ಎಂಬ ಹೆಗ್ಗಳಿಕೆಗಳು ಈ ಶಾಲೆಗೆ ಸಲ್ಲುತ್ತಿದೆ. ಸುಂದರವಾದ ಪರಿಸರ, ವಿಶಾಲವಾದ ಆಟದ ಮೈದಾನ, ಎಲ್‍ಕೆಜಿಯಿಂದ ಪಿಯುಸಿವರೆಗೆ ಒಂದೇ ಕ್ಯಾಂಪಸ್‍ನಲ್ಲಿ ಶಿಕ್ಷಣ ಪಡೆಯಬಹುದಾದ ಕೆಪಿಎಸ್ ವ್ಯವಸ್ಥೆ ಮೊದಲಾದವುಗಳು ಶಾಲಾ ಹಿರಿಮೆಯನ್ನು ಹೆಚ್ಚಿಸಿದೆ.

………………………………………………………..
ಗೋಪಾಲ ಅಂಚನ್, ಆಲದಪದವು